ಕಾರವಾರ, ಅಕ್ಟೋಬರ್ 3: ನಿನ್ನೆ ಸಂಜೆ ಕಾರವಾರ ಸಮೀಪದ ಕದ್ವಾಡ ಗ್ರಾಮದಲ್ಲಿ ಎಡೆಬಿಡದೇ ಸುರಿಯುತ್ತಿರುವ ಮಳೆಯ ಕಾರಣ ಮಣ್ಣು ಕುಸಿದು ಹತ್ತು ಜನರು ಸಮಾಧಿಯಾಗಿದ್ದಾರೆಂದು ವರದಿಯಾಗಿದೆ. ಈ ಘಟನೆ ನಿನ್ನೆ ಸಂಜೆ ಸುಮಾರು ಏಳು ಘಂಟೆಗೆ ನಡೆದಿದೆ.
ಗುಡ್ಡದ ಅಂಚಿನಲ್ಲಿದ್ದ ಮನೆಗಳ ಮೇಲೆ ಗುಡ್ಡದ ಪಾರ್ಶ್ವವೊಂದು ಜರಿದುಬಿದ್ದು ಆಸಿಪಾಸ್ತಿ ನಷ್ಟವಾಗಿದೆ. ಆ ಸಮಯದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಜನರು ಮನೆಗಳಲ್ಲಿದ್ದರೆಂದು ತಿಳಿದುಬಂದಿದೆ. ಇದುವರೆಗೆ ಹತ್ತು ಶವಗಳು ಪತ್ತೆಯಾಗಿದ್ದು ಉಳಿದವರ ಬಗ್ಗೆ ಅಂತಿಮ ವರದಿ ಬರುವವರೆಗೆ ಯಾವುದೇ ಮಾಹಿತಿ ಇರಲಿಲ್ಲ. ಮಣ್ಣುಕುಸಿತದ ಬಳಿಕ ಗುಡ್ಡದ ಮೇಲಿದ್ದ ಬಂಡೆಗಲ್ಲುಗಳೂ ಉರುಳಿ ಮನೆಗಳ ಮೇಲೆ ಬಿದ್ದಿವೆ.
ಜಿಲ್ಲಾ ಎಸ್ಪಿ ಹಾಗೂ ಉಳಿದ ಅಧಿಕಾರಿಗಳು ಸ್ಥಳಕ್ಕೆ ತಲುಪಲು ಪ್ರಯತ್ನಿಸುತ್ತಿದ್ದು ಮಳೆಯ ಕಾರಣ ರಸ್ತೆಯ ಮೇಲೆ ನೀರು ತುಂಬಿದ್ದು ಪ್ರಯಾಣಕ್ಕೆ ಅಡಚಣೆಯುಂಟಾಗಿದೆ. ಆ ಕಾರಣ ಸುಮಾರು ಹತ್ತು ಘಂಟೆಯ ಬಳಿಕವಷ್ಟೇ ರಕ್ಷಣಾಪಡೆಗಳಿಗೆ ಸ್ಥಳ ತಲುಪಲು ಸಾಧ್ಯವಾಗಿದೆ.
ನಮ್ಮ ಪ್ರತಿನಿಧಿ ವರದಿ